172+
Registered Members
6
GCC Countries
1
Europe Countries
100%
Community Driven

ಕೊಡಗು ಸುನ್ನಿ ವೆಲ್ಫೇರ್ (KSWA)

ಸೇವೆಯ ಮೂಲಕ ಸಮಾಜದ ಉಜ್ವಲ ಭವಿಷ್ಯದತ್ತ…

ನಮ್ಮ ಕುರಿತು (About Us)

ಸೇವೆ, ಸಾಂತ್ವನ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ತನ್ನ ಜೀವನಧರ್ಮವಾಗಿ ಸ್ವೀಕರಿಸಿದ ಪ್ರವಾಸಿ ಸಮುದಾಯದ ಸಶಕ್ತ ಸಂಘಟನೆಯೇ ಕೊಡಗು ಸುನ್ನಿ ವೆಲ್ಫೇರ್ (KSWA).

ಪ್ರವಾಸಿ ಲೋಕದಲ್ಲಿ ಸಂಖ್ಯಾತ್ಮಕವಾಗಿ ಅತಿ ಸಣ್ಣ ಸಮುದಾಯವಾಗಿರುವ ಕೊಡಗು ಜಿಲ್ಲೆಯ ಸುನ್ನಿ ಬಂಧುಗಳು, ಏಕತೆಯ ಬಲ, ವಿಶ್ವಾಸದ ದೃಢತೆ ಮತ್ತು ಆತ್ಮಬೋಧನೆಯ ಪ್ರೇರಣೆಯೊಂದಿಗೆ ಒಂದಾದಾಗ ರೂಪುಗೊಂಡ ಈ ಮಹೋನ್ನತ ಚಳವಳಿ, ಇಂದು ಮಾನವೀಯ ಸೇವೆ, ಶಿಕ್ಷಣ, ಸಾಮಾಜಿಕ ಕಲ್ಯಾಣ, ಸಾಂತ್ವನ ಮತ್ತು ಸದಸ್ಯರ ಸಬಲೀಕರಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಸೇವಾಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ.

25 ವರ್ಷಗಳ ಹಿಂದೆ UAE ಯಲ್ಲಿ ಉದಯಗೊಂಡು, GCC ರಾಷ್ಟ್ರಗಳಾದ್ಯಂತ ಸೇವೆಯ ಸಂದೇಶವನ್ನು ಪಸರಿಸಿದ KSWA, ಇಂದು ಕೇವಲ ಒಂದು ಸಂಘಟನೆಯಾಗಿ ಉಳಿಯದೆ, ಸಮಾಜದ ನಿರೀಕ್ಷೆಗಳಿಗೆ ಶಕ್ತಿ ತುಂಬುವ, ಸಂಕಷ್ಟದಲ್ಲಿರುವವರಿಗೆ ಭರವಸೆಯ ಬೆಳಕಾಗುವ ಮತ್ತು ಸೇವೆಯ ಮೂಲಕ ಜನಜೀವನಕ್ಕೆ ಹೊಸ ಆಶಯಗಳನ್ನು ನೀಡುವ ಮಹತ್ವದ ಸೇವಾ ಚಳವಳಿಯಾಗಿ ಬೆಳೆದು ನಿಂತಿದೆ.

ಅಸಹಾಯಕರನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಕರುಣೆಯ ಹಸ್ತವಾಗಿಯೂ, ಸಂಕಷ್ಟದ ಕ್ಷಣಗಳಲ್ಲಿ ಸಾಂತ್ವನದ ನೆರಳಾಗಿಯೂ, ಶಿಕ್ಷಣದ ಮೂಲಕ ಹೊಸ ತಲೆಮಾರಿನ ಭವಿಷ್ಯಕ್ಕೆ ಜ್ಞಾನದ ಬೆಳಕು ಚೆಲ್ಲುವ ಮಾರ್ಗದರ್ಶಿಯಾಗಿಯೂ KSWA ತನ್ನ ಸೇವಾಯಾತ್ರೆಯನ್ನು ಅಚಲವಾಗಿ ಮುಂದುವರಿಸುತ್ತಿದೆ…

ಒಂದು ಪ್ರದೇಶದ ನೋವನ್ನು ಇಡೀ ಸಮಾಜದ ಹೊಣೆಗಾರಿಕೆಯಾಗಿ ಪರಿವರ್ತಿಸಿ, ಪ್ರವಾಸಿಗಳ ಸಮಸ್ಯೆಗಳಿಗೆ ಸಾಮೂಹಿಕ ಹಸ್ತಕ್ಷೇಪದ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವ ಈ ಚಳವಳಿ, ಸೇವೆಯ ಹೊಸ ಮಾದರಿಗಳನ್ನು ಸೃಷ್ಟಿಸುತ್ತಾ ಮುನ್ನಡೆಯುತ್ತಿದೆ.

ನಮ್ಮ ದರ್ಶನ (Our Vision)

ಏಕತೆ, ವಿಶ್ವಾಸ ಮತ್ತು ಕರುಣೆಯನ್ನು ಮೂಲಾಧಾರವನ್ನಾಗಿ ಮಾಡಿಕೊಂಡು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸಬಲಗೊಂಡ ಆದರ್ಶ ಸಮಾಜವನ್ನು ರೂಪಿಸುವುದು.

ಪ್ರತಿಯೊಬ್ಬ ಸದಸ್ಯನ ಹಾಗೂ ಅವರ ಕುಟುಂಬದ ಕಲ್ಯಾಣ ಮತ್ತು ಪ್ರಗತಿಯನ್ನು ಖಚಿತಪಡಿಸಿ, ಸೇವೆಯ ಮೂಲಕ ಸಮಾಜಕ್ಕೆ ಆಶಾಭರವಸೆ ಮತ್ತು ಶಕ್ತಿಯನ್ನು ನೀಡುವ ವಿಶ್ವಾಸಾರ್ಹ ಸಮುದಾಯ ಸಂಘಟನೆಯಾಗಿ ಬೆಳೆಯುವುದು.

ನಮ್ಮ ಧ್ಯೇಯ (Our Mission)

ಪ್ರವಾಸಿಗಳ ಅಗತ್ಯತೆಗಳು ಮತ್ತು ಸವಾಲುಗಳನ್ನು ಆಳವಾಗಿ ಅರಿತು, ಕರುಣೆ ಮತ್ತು ಹೊಣೆಗಾರಿಕೆಯ ಮನೋಭಾವವನ್ನು ಮುಂಚೂಣಿಯಲ್ಲಿರಿಸಿ, ಸುಸ್ಥಿರ ಹಾಗೂ ಪರಿಣಾಮಕಾರಿಯಾದ ಸೇವಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.

ಶಿಕ್ಷಣ, ಸಾಂತ್ವನ, ಮಾನವೀಯ ಸೇವೆ, ಸಾಮಾಜಿಕ ಭದ್ರತೆ, ಆರ್ಥಿಕ ಸಬಲೀಕರಣ ಹಾಗೂ ಆಧ್ಯಾತ್ಮಿಕ–ಧಾರ್ಮಿಕ ಜಾಗೃತಿಯ ಮೂಲಕ ಸದಸ್ಯರು ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವುದು.

ನಮ್ಮ ಪ್ರಮುಖ ಉದ್ದೇಶಗಳು (Our Objectives)

ಸಂಘಟನೆಯ ಪ್ರತಿಯೊಬ್ಬ ಸದಸ್ಯನ ಕಲ್ಯಾಣ, ಪ್ರಗತಿ ಮತ್ತು ಉನ್ನತಿಗೆ ಪ್ರಥಮ ಆದ್ಯತೆ ನೀಡುವುದು.

ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಸದಸ್ಯರು ಮತ್ತು ಅವರ ಕುಟುಂಬಗಳಿಗೆ ಅಗತ್ಯವಾದ ನೆರವು ಹಾಗೂ ಬೆಂಬಲವನ್ನು ಖಚಿತಪಡಿಸುವುದು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸಹಾಯ ಯೋಜನೆಗಳು ಮತ್ತು ಪ್ರೋತ್ಸಾಹಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು.
ಯುವಪೀಳಿಗೆಯ ಪ್ರತಿಭೆ, ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ತರಬೇತಿ ಹಾಗೂ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು.
ಸದಸ್ಯರ ಉದ್ಯೋಗಾವಕಾಶ, ಆರ್ಥಿಕ ಭದ್ರತೆ ಮತ್ತು ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ದೀರ್ಘಕಾಲೀನ ಯೋಜನೆಗಳನ್ನು ಸಿದ್ಧಪಡಿಸುವುದು.
ಸಂಕಷ್ಟದ ಸಂದರ್ಭಗಳಲ್ಲಿ ಸದಸ್ಯರು ಮತ್ತು ಸಮಾಜದೊಂದಿಗೆ ದೃಢವಾದ ಬೆಂಬಲದ ಕೈಯಾಗಿ ನಿಲ್ಲುವುದು.
ಮಾನವೀಯ–ಸಾಂತ್ವನ ಸೇವೆಗಳನ್ನು ಇನ್ನಷ್ಟು ವಿಸ್ತರಿಸಿ, ಅದರ ಫಲಾನುಭವವನ್ನು ಅರ್ಹ ಸದಸ್ಯರು ಮತ್ತು ಕುಟುಂಬಗಳಿಗೆ ತಲುಪಿಸುವುದು.
ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಸಂರಕ್ಷಿಸಿ, ಅವುಗಳನ್ನು ಹೊಸ ತಲೆಮಾರಿಗೆ ಸಾರ್ಥಕವಾಗಿ ಹಸ್ತಾಂತರಿಸುವುದು.
ಸಮಾಜದಲ್ಲಿ ಏಕತೆ, ಸಹಕಾರ, ಪರಸ್ಪರ ಪ್ರೀತಿ ಮತ್ತು ಹೊಣೆಗಾರಿಕೆಯ ಪ್ರಜ್ಞೆಯನ್ನು ಮತ್ತಷ್ಟು ಬಲಪಡಿಸುವುದು.
ಗಲ್ಫ್ ಸಹಕಾರ ಮಂಡಳಿಯ ರಾಷ್ಟ್ರಗಳಾದ್ಯಂತ ಸಂಘಟನೆಯ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವುದು.

ನಮ್ಮ ಆಧ್ಯಾತ್ಮಿಕ ಪರಂಪರೆ

ಈ ಮಹೋನ್ನತ ಪಯಣಕ್ಕೆ ಭದ್ರ ಅಡಿಪಾಯ ಹಾಕಿದ ದೂರದರ್ಶಿ ಹಿರಿಯರನ್ನು ಹಾಗೂ ಆದರ್ಶಪ್ರಜ್ಞೆಯ ಬಲದಿಂದ ಸಂಘಟನೆಯನ್ನು ಸನ್ಮಾರ್ಗದತ್ತ ಮುನ್ನಡೆಸಿದ ಆಧ್ಯಾತ್ಮಿಕ ನಾಯಕರನ್ನು ನಾವು ಕೃತಜ್ಞತೆ ಮತ್ತು ಅಪಾರ ಗೌರವದಿಂದ ಸ್ಮರಿಸುತ್ತೇವೆ.

ಅವರ ಮೂಲಕ ನಮಗೆ ಹಸ್ತಾಂತರಗೊಂಡ ಆಧ್ಯಾತ್ಮಿಕ ಪರಂಪರೆಯ ಸುಗಂಧವು ನಮ್ಮ ಚಿಂತನೆಗಳಲ್ಲಿ, ಕಾರ್ಯಗಳಲ್ಲಿ ಮತ್ತು ನಿಲುವುಗಳಲ್ಲಿ ಸದಾಕಾಲವೂ ತುಂಬಿ ತುಳುಕಲಿ.

ಅವರಿಂದ ಪ್ರಜ್ವಲಿಸಲ್ಪಟ್ಟ ಆ ಬೆಳಕು ನಮ್ಮ ಸೇವಾಪಥದಲ್ಲಿ ಎಂದಿಗೂ ನಂದದ ದೀಪವಾಗಿ, ತಲೆಮಾರುಗಳಿಗೆ ದಾರಿದೀಪವಾಗಿ ಶಾಶ್ವತವಾಗಿ ಬೆಳಗುತ್ತಿರಲಿ…

ಮುಂದಿನ ದಿನಗಳಲ್ಲಿ ನಮ್ಮ ಮುಂದೆ ಅನೇಕ ಬಹುಮುಖ ಯೋಜನೆಗಳಿವೆ…

ಸೇವೆಯ ವ್ಯಾಪ್ತಿಯನ್ನು ಇನ್ನಷ್ಟು ವಿಶಾಲಗೊಳಿಸುವ ಮಹತ್ತರ ಕನಸುಗಳಿವೆ…

ಸದಸ್ಯರ ಜೀವನದಲ್ಲಿ ಹೊಸ ಆಶಾಭರವಸೆಗಳನ್ನು ಮೂಡಿಸುವ ಪವಿತ್ರ ಹೊಣೆಗಾರಿಕೆಯಿದೆ…

ಈ ಸೇವಾಯಾತ್ರೆಯಲ್ಲಿ ಸಂಘಟನೆಯ ಪ್ರತಿಯೊಬ್ಬ ಸದಸ್ಯನ ಕಲ್ಯಾಣ, ಪ್ರಗತಿ ಮತ್ತು ಉನ್ನತಿಗೆ ಅತ್ಯುನ್ನತ ಆದ್ಯತೆ ನೀಡುವುದಾಗಿ KSWA ದೃಢವಾಗಿ ಭರವಸೆ ನೀಡುತ್ತದೆ.

ಏಕತೆಯೇ ನಮ್ಮ ಶಕ್ತಿ
ಸೇವೆಯೇ ನಮ್ಮ ದಾರಿ
ಕರುಣೆಯೇ ನಮ್ಮ ಗುರುತು
ವಿಶ್ವಾಸವೇ ನಮ್ಮ ಅಡಿಪಾಯ
ಕೊಡಗು ಸುನ್ನಿ ವೆಲ್ಫೇರ್ (KSWA)

ಒಗ್ಗಟ್ಟಿನ ಶಕ್ತಿಯಲ್ಲಿ… ಸೇವೆಯ ಬೆಳಕಿನಲ್ಲಿ… ಸಮಾಜದ ಉಜ್ವಲ ಭವಿಷ್ಯದತ್ತ…

Join the KSWA Family Today

Register your membership in minutes and get your official KSWA membership card.

Become a Member